ಗಂಗೋತ್ರಿ

ಗಂಗಾವತಾರ ಎಂಬುದರ ತದ್ಭವ ಶಬ್ದವಿದು. ಪವಿತ್ರ ಗಂಗಾನದಿಯ ಉಗಮಸ್ಥಾನವೆಂದು ಇದರ ತಾತ್ಪರ್ಯ. ಗರ್ವಾಲ್ ಸಂಸ್ಥಾನಕ್ಕೆ ಸೇರಿದ ತೀಹ್ರೀ ಜಿಲ್ಲೆಯಲ್ಲಿರುವ ಈ ಸ್ಥಳ ಹಿಂದೂ ಜನರಿಗೆ ಪವಿತ್ರ ಯಾತ್ರಾಸ್ಥಳವಾಗಿದೆ. ಉತ್ತರ ಅಕ್ಷಾಂಶ 310, ಪೂರ್ವರೇಖಾಂಶ 780 ಇಲ್ಲೊಂದು ಗಂಗಾದೇವಿಯ ದೇವಾಲಯವೂ ಇದೆ. ದೇವಾಲಯಕ್ಕೆ ಹತ್ತಿರದಲ್ಲಿಯೇ ಗೌರೀಕುಂಡವೆಂಬಲ್ಲಿ ಕೇದಾರಗಂಗಾ ಎಂಬ ಉಪನದಿ ಭಾಗೀರಥಿಯನ್ನು ಸೇರುತ್ತದೆ. ಪಾಪಗಳನ್ನು ಕಳೆದು ಕೊಳ್ಳಬೇಕೆಂಬ ಯಾತ್ರಾರ್ಥಿಗಳು ಈ ಸಂಗಮದಲ್ಲಿ ಸ್ನಾನಮಾಡುತ್ತಾರೆ. ಇಲ್ಲಿರುವ ಗಂಗಾದೇವಿ ಗುಡಿ ಈಚಿನದು; ಇದನ್ನು 18ನೆಯ ಶತಮಾನದಲ್ಲಿ ಗೂರ್ಖ ಅಧಿಕಾರಿಯೊಬ್ಬ ಕಟ್ಟಿಸಿದ. ಗಂಗೋತ್ರಿಯಲ್ಲಿ ಭೈರವನ ಒಂದು ಗುಡಿಯೂ ಉಂಟು. ಮೂಲತಃ ಆರ್ಯೇತರ ದೇವತೆಯಾದ ಭೈರವನಿಗೆ ಆರ್ಯ ದೇವಗಣದಲ್ಲಿ ಪ್ರವೇಶ ದೊರೆತಾಗ ಅವನಿಗೆ ದ್ವಾರಪಾಲಕನ ಸ್ಥಾನ ಮೀಸಲಾಯಿತೆಂದು ಕಾಣುತ್ತದೆ. ಗಂಗಾನದಿಯ ನಿಜವಾದ ಉಗಮ ಒಂದು ಗುಹೆಯಾಗಿದ್ದು ಅದನ್ನು ಗೋಮುಖವೆನ್ನುವರು. ಹಿಮವತ್ಪರ್ವತದ ಮಂಜು ಮತ್ತು ಹಿಮ ಕರಗಿದಂತೆ ಆ ಗವಿಯೊಳಗಿಂದ ನೀರು ಭೋರ್ಗರೆಯುತ್ತ ಹೊರಗೆ ಹರಿಯುವುದು ಕಾಣುತ್ತದೆ. ಆದರೆ ಸಾಮಾನ್ಯವಾಗಿ ಜನ ಗಂಗೋತ್ರಿಯನ್ನೇ ಗಂಗೆಯ ಉಗಮವೆಂದು ಭಾವಿಸುತ್ತಾರಲ್ಲದೆ ಇನ್ನೂ ಮೇಲಿನ ಗುಡ್ಡವನ್ನೇರಿ ಗೋಮುಖದವರೆಗೆ ಹೋಗುವ ಪ್ರಯಾಸವನ್ನು ಕೈಗೊಳ್ಳುವುದಿಲ್ಲ. ಆದರೆ ಆ ದಾರಿಯೇನೂ ಅವರು ಭಾವಿಸುವಷ್ಟು ದುರ್ಗಮವಾಗಿಲ್ಲ. 

	ಪುರಾಣಗಳಲ್ಲಿ ಗಂಗೋತ್ರಿ ಕ್ಷೇತ್ರದ ಮಹಿಮೆ ಅಷ್ಟೊಂದು ವರ್ಣಿತವಾಗಿದ್ದರೂ ಪ್ರವಾಸದ ಕಷ್ಟದಿಂದಾಗಿ ಇಲ್ಲಿಗೆ ಬರುವ ಯಾತ್ರಿಕರ ಸಂಖ್ಯೆ ಹೆಚ್ಚಾಗಿರುವುದಿಲ್ಲ. ಗಂಗೋತ್ರಿಯಲ್ಲಿನ ಗಂಗೆಯನ್ನು ಕಲಶಗಳಲ್ಲಿ ತುಂಬಿ ಮೊಹರು ಮಾಡಿ ಸುತ್ತಣ ಪಟ್ಟಣಗಳ ಮಾರಾಟ ಮಾಡುತ್ತಾರೆ. 			 					(ಕೆ.ಕೆ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ